ರಸ್ತೆಗುಂಡಿ ಮುಚ್ಚಿ ಮಾದರಿಯಾದ- BVS ಯುವಕರು*
ಪಾವಗಡ:- ತಾಲ್ಲೂಕಿನ ನಿಡಗಲ್ ಹೋಬಳಿ , ನ್ಯಾಯದಗುಂಟೆ ಪಂಚಾಯಿತಿ ವ್ಯಾಪ್ತಿಯ ಚಿಕ್ಕತಿಮ್ಮನಹಟ್ಟಿ ಗ್ರಾಮದ ನಡುವೆ ಹಾದು ಹೋಗುವ ಮುಖ್ಯ ರಸ್ತೆ ದುರಸ್ತಿಯಾಗದ ಹಿನ್ನೆಲೆ ಗುಂಡಿ ಬಿದ್ದ ಸ್ಥಳಕ್ಕೆ ಮನೆಗಳ ಬಚ್ಚಲು ನೀರು ಸಂಗ್ರಹಗೊಂಡು ಕೊಳಚೆಯಾಗಿ ದುರ್ನಾತ ಸೂಸುತ್ತ ಕಿರಿ ಕಿರಿ ಉಂಟು ಮಾಡುತ್ತಿತ್ತು. ಸ್ಥಿರವಾಗಿ ನಿಂತ ಮಲೀನ ನೀರಿನಿಂದ ಪ್ರಯಾಣಿಕರು ತುಂಬಾನೇ ತೊಂದರೆ ಅನುಭವಿಸುತ್ತಿದ್ದರು. ಇತ್ತೀಚಿಗೆ ಮಕ್ಕಳು ಮತ್ತು ದ್ವಿಚಕ್ರ ವಾಹನ ಸವಾರರು ಆಯ ತಪ್ಪಿ ಬಿದ್ದು ಗಾಯಗೊಂಡ ನಿದರ್ಶನಗಳಿವೆ.ಇನ್ನು ನಿಂತ ಕೊಳಚೆ ನೀರಿನಿಂದ ಸೊಳ್ಳೆ ಹೆಚ್ಚಾದ ಪರಿಣಾಮ ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದರು.
ಇದನ್ನ ಮನಗಂಡ (ಬಿ.ವಿ.ಎಸ್) ಭಾರತೀಯ ವಿದ್ಯಾರ್ಥಿ ಸಂಘದ ಕಾರ್ಯಕರ್ತರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದು ತಾವೇ ಸ್ವಯಂ ಪ್ರೇರಣೆಯಿಂದ ಸ್ವಚ್ಚಗೊಳಿಸಿ,ಕೊಳಚೆ ತುಂಬಿದ್ದ ರಸ್ತೆಯ ಗುಂಡಿಗೆ ಮಣ್ಣು ಹಾಕಿಸುವ ಮಾದರಿ ಕಾರ್ಯ ಮಾಡಿ ಗ್ರಾಮಸ್ಥರಿಂದ ಮೆಚ್ಚುಗೆ ಪಡೆದಿದ್ದಾರೆ.
ಬಿ.ವಿ.ಎಸ್. ಕಾರ್ಯಕರ್ತ ಚಿಕ್ಕತಿಮ್ಮನಹಟ್ಟಿ ಕೆಂಚರಾಯ ಮಾತನಾಡಿ ಸ್ವಚ್ಚತೆ ನಮ್ಮ ಬದುಕಿನ ಅಂಗವಾಗಿರಬೇಕು. ಜೊತೆಗೆ ಗ್ರಾಮಗಳಲ್ಲಿ ಜನಸಾಮಾನ್ಯರು ಪರಿಸರ ಸಂರಕ್ಷಣೆಯೊಂದಿಗೆ ಗ್ರಾಮ ನೈರ್ಮಲ್ಯ ಕಡೆ ಗಮನಹರಿಸಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಕಾರ್ಯಕರ್ತರಾದ ಕಾರ್ತಿಕ್,ಓಬಳೇಶ್, ಪಿ.ಪ್ರಭಾಕರ,ಅತಿಥಿ ಶಿಕ್ಷಕ ದೇವರಾಜು ಸೇರಿದಂತೆ ಗ್ರಾಮಸ್ಥರು ಸಹಕರಿಸಿದ ಪಿಡಿಒ ಗಂಗಾಮಹಾದೇವಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ವರದಿ : ನವೀನ್ ಕಿಲಾರ್ಲಹಳ್ಳಿ