ಖಾಸಗಿ ಶಾಲಾ ಶಿಕ್ಷಕರಿಗೆ ದವಸ ಧಾನ್ಯ, ಅಡುಗೆ ಎಣ್ಣೆ ವಿತರಣೆ
ಕೋವಿಡ್19 ಎರಡನೇ ಅಲೆ ಇಡೀ ದೇಶವನ್ನೇ ನಲುಗಿಸಿದೆ. ಈ ಮಹಾ ಮಾರಿಯ ಸಾವಿನ ಸುನಾಮಿಯು ಎಲ್ಲೆಡೆ ಏಕಪ್ರಕಾರವಾಗಿ ಹರಡುತ್ತಿದ್ದು, ಇಡೀ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಈ ನಿಟ್ಟಿನಲ್ಲಿ ಖಾಸಗಿ ಶಾಲಾ ಶಿಕ್ಷಕರ ಸ್ಥಿತಿ ಹೇಳತೀರದು. ಇತ್ತ ದರಿ, ಅತ್ತ ಪುಲಿ ಎಂಬಂತಿದೆ ಇವರ ಸ್ಥಿತಿ. ಪಾವಗಡ ತಾಲ್ಲೂಕಿನ ಖಾಸಗಿ ಶಿಕ್ಷಕರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇತ್ತೀಚೆಗೆ ಪೂಜ್ಯ ಸ್ವಾಮೀಜಿಯವರಲ್ಲಿ ಈ ನತದೃಷ್ಟ ಶಿಕ್ಷಕರ ಸ್ಥಿತಿಯನ್ನು ವಿವರಿಸಿದಾಗ ತತ್‍ಕ್ಷಣ ಪೂಜ್ಯ ಸ್ವಾಮೀಜಿಯವರು ಸ್ಪಂದಿಸಿ ಸರಿಸುಮಾರು 250 ಖಾಸಗಿ ಶಾಲಾ ಶಿಕ್ಷಕರಿಗೆ ಸಹಾಯ ಹಸ್ತವನ್ನು ನೀಡಲು ಸಮ್ಮತಿಸಿದರು.
ಇಂದು ಈ ಕಾರ್ಯಕ್ರಮದ ಆರಂಭೋತ್ಸವ ನೆರವೇರಿತು. ಖಾಸಗಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಪ್ರಸನ್ನಮೂರ್ತಿ ರವರು, ಹಿರಿಯ ವಕೀಲರಾದ ಶ್ರೀ ಯಜ್ಞನಾರಾಯಣ ಶರ್ಮ ರವರು, ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಶ್ರೀ ಸುದೇಶ್ ಬಾಬು ರವರು ಹಾಗೂ ವಿವೇಕ ಬ್ರಿಗೇಡಿನ ಶ್ರೀ ದೇವರಾಜ್ ಲೋಕೇಶ್ ರವರು, ಶ್ರೀವೇಣುಗೋಪಾಲರೆಡ್ಡಿ ಹಾಗೂ ಇತರ ಸದಸ್ಯರು ಭಾಗವಹಿಸಿದ್ದರು.
ಸುಮಾರು ಐದು ದಿವಸದ ಈ ಕಾರ್ಯಕ್ರಮ ಪ್ರತಿ ದಿನ ದವಸ ಧಾನ್ಯದ ಕಿಟ್‍ನ್ನು ವಿತರಿಸುವಂತಹ ಯೋಜನೆಯಾಗಿದೆ. ಇನ್ಫೋಸಿಸ್ ಫೌಂಡೇಷನ್ನಿನ ಸಹಕಾರದಿಂದ ಈ ಯೋಜನೆ ಕಳೆದ ಬಾರಿಯೂ ನೆರವೇರಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕಳೆದ ಬಾರಿ ಸರಿಸುಮಾರು 30000 ಧಾನ್ಯದ ಕಿಟ್‍ಗಳನ್ನು ಪಾವಗಡ, ತುಮಕೂರು, ಮಧುಗಿರಿ, ಕೊರಟಗೆರೆ, ಗುಲ್ಬರ್ಗಾ, ಬಿಜಾಪುರ, ಶಹಾಪುರ, ಜಮಖಂಡಿ ಹಾಗೂ ಮಹಾರಾಷ್ಟ್ರದ ಗಡಿ ಭಾಗದಲ್ಲಿನ ಪ್ರವಾಹ ಪೀಡಿತ ಹಾಗೂ ಕೋವಿಡ್19ರ ಮೊದಲನೆಯ ಅಲೆಯಲ್ಲಿ ಸಿಲುಕಿದ ಜನರಿಗೆ ಸಹಾಯಹಸ್ತವನ್ನು ನೀಡಲು ಇನ್ಫೋಸಿಸ್ ಫೌಂಡೇಷನ್ ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮ ಮಹಾರಾಷ್ಟ್ರದ ಶೋಲಾಪುರದವರೆಗೂ ಧಾವಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದೇ ಸಂದರ್ಭದಲ್ಲಿ ಪಾಂಡಿಚೆರಿ ಹಾಗೂ ತಮಿಳುನಾಡಿನಲ್ಲಿ ಸಂಭವಿಸಿದ ಚಂಡಮಾರುತದಲ್ಲಿ ತುತ್ತಾಗಿದ್ದವರಿಗೂ ಸಹ ಸಹಾಯಹಸ್ತವನ್ನು ನೀಡಿದ್ದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು. ಈಗ ಕೋವಿಡ್ ಎರಡನೇ ಅಲೆ ಭಯಂಕರವಾಗಿದ್ದು ಪೂಜ್ಯ ಸ್ವಾಮಿ ಜಪಾನಂದಜೀ ರವರು ಯಾವುದೇ ರೀತಿಯ ಭಯಾನಕ ಸ್ಥಿತಿಯಲ್ಲೂ ಧೈರ್ಯ ಹಾಗೂ ಸ್ಥೈರ್ಯದಿಂದ ಸೇವಾ ಯಜ್ಞವನ್ನು ನಿರಂತರವಾಗಿ ನಡೆಸುತ್ತಿರುವುದನ್ನು ಇಡೀ ರಾಜ್ಯದಲ್ಲಿಯೇ ಒಂದು ಮಹಾನ್ ವಿಚಾರವಾಗಿ ಪರಿಗಣಿಸಲ್ಪಟ್ಟಿದೆ. ಇಂದು ಸರಿಸುಮಾರು 80 ಖಾಸಗಿ ಶಾಲೆಗಳ ಶಿಕ್ಷಕರು ತಮ್ಮ ಪರಿಹಾರ ಸಾಮಗ್ರಿಗಳನ್ನು ಪೂಜ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಸ್ವೀಕರಿಸಿ ಧನ್ಯರಾದರು. ಪೂಜ್ಯ ಸ್ವಾಮೀಜಿಯವರು ನೆರೆದ ಖಾಸಗಿ ಶಾಲಾ ಶಿಕ್ಷಕರನ್ನುದ್ದೇಶಿಸಿ ಮಾತನಾಡುತ್ತಾ ಶಿಕ್ಷಕರು ದೇಶದ ಭವಿಷ್ಯವನ್ನು ರೂಪಿಸುವಂತಹ ಮಹತ್ತರವಾದ ಕಾರ್ಯವನ್ನು ಕೈಗೊಳ್ಳುವರು. ಅವರಿಗೆ ಸದಾ ಸಹಕಾರ, ಪ್ರೋತ್ಸಾಹ ಹಾಗೂ ಸಹಾಯ ನೀಡುವುದು ನಮ್ಮೆಲ್ಲರ ಆದಮ್ಯ ಕರ್ತವ್ಯವಾಗಿದೆ. ಕಳೆದ ಬಾರಿಯೂ ಸಹ ಎರಡೆರಡು ಬಾರಿ ರೇಷನ್ ಕಿಟ್ಟುಗಳನ್ನು ಶ್ರೀಮತಿ ಸುಧಾಮೂರ್ತಿ ರವರ ಇನ್ಫೋಸಿಸ್ ಫೌಂಡೇಷನ್ನಿಂದ ನೀಡಲಾಗಿತ್ತು. ಈ ಬಾರಿಯೂ ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್ ನಿರಂತರವಾಗಿ ತಮ್ಮ ಸೇವಾ ಯಜ್ಞವನ್ನು ನಡೆಸುತ್ತಿದೆ ಎಂದು ಪೂಜ್ಯ ಸ್ವಾಮಿ ಜಪಾನಂದಜೀ ರವರು ತಿಳಿಸಿದರು.