20211116 222848

ಯುವರತ್ನ’ನಿಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’

FILM NEWS Genaral STATE

*‘ಯುವರತ್ನ’ನಿಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’ : ಸಿಎಂ ಘೋಷಣೆ*

ಪುನೀತ್ ಚಾರಿತ್ರ್ಯವೇ ಒಂದು ಚರಿತ್ರೆ – ಬಸವರಾಜ ಬೊಮ್ಮಾಯಿ

ಬೆಂಗಳೂರು, ನವೆಂಬರ್ 16 : ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದರು.

ಅವರು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ಪುನೀತ್ ನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಪುನೀತ್ ರಾಜ್‌ಕುಮಾರ್‌ರವರಿಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’ ಘೋಷಣೆ ಮಾಡಿದ ಮುಖ್ಯಮಂತ್ರಿಗಳು, ವಿವಿಧ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು.ಯುವರತ್ನ ಪುನೀತ್‌ರ ನೆನಪನ್ನು ಚಿರಸ್ಥಾಯಿಯಾಗಿಸಲು ಪುನೀತ್ ಸ್ಮಾರಕವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

*ಚಿಕ್ಕವಯಸ್ಸಿನಲ್ಲಿಯೇ ಸಾಧನೆಯ ಶಿಖರ ಏರಿದ ಪುನೀತ್* :

ಅಪ್ಪು ನನಗೆ ಆತ್ಮೀಯ. ಬಾಲ್ಯದಲ್ಲಿಯೇ ಪ್ರತಿಭೆಯ ಚಿಲುಮೆ, ಕರ್ನಾಟಕ ಇತಿಹಾಸದಲ್ಲಿ ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದ ಏಕಮೇವ ನಟ. ತಂದೆಯೊಂದಿಗೆ ನಟಿಸುವಾಗ ತಂದೆ ಮಗನ ಸಂಬಂಧ ಮೀರಿ ಅಪ್ಪು ಪಾತ್ರದಲ್ಲಿ ಲೀನವಾಗುತ್ತಿದ್ದ ಪರಿ ಅದ್ಭುತವಾದುದು. ತಮ್ಮ ನಟನೆಯಿಂದ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಆಕರ್ಷಣೆ ಮಾಡುತ್ತಿದ್ದ ಪವರ್ ಸ್ಟಾರ್ ಪುನೀತ್‌ರ ವಿನಯಭರಿತ ನಡೆ, ನುಡಿಯಲ್ಲಿ ಡಾ|| ರಾಜ್‌ರವರನ್ನು ಕಾಣಬಹುದು. ‘ಶರಣರನ್ನು ಮರಣದಲ್ಲಿ ನೋಡು’ ಎನ್ನುವಂತೆ ಪುನೀತ್‌ರ ಅಗಲಿಕೆಗೆ ಅಭಿಮಾನಿಗಳು ಸ್ಪಂದಿಸಿದ ರೀತಿ ಪುನೀತ್‌ರ ಮೇರು ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ದೇಶಕ್ಕೆ ಅಗಾಧವಾದ ಚಾರಿತ್ರಿಕ ಹಿನ್ನೆಲೆ ಇದೆ. ಚಾರಿತ್ರ್ಯ ಇರುವವರು ಕಡಿಮೆ. ಅಪ್ಪು ಚಾರಿತ್ರ್ಯವಂತನಾಗಿ ಚರಿತ್ರೆಗೆ ಸೇರಿದ್ದಾರೆ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.

ಅಂತಿಮ ದರ್ಶನದ ಸಂದರ್ಭದಲ್ಲಿ ತಾವು ಅಪ್ಪುವಿಗೆ ಮುತ್ತು ನೀಡಿದ ಕುರಿತು ಹಲವಾರು ಜನ ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಆದರೆ ಆ ಮುತ್ತನ್ನು ನಾನು ಹೃದಯದಿಂದ ನೀದಿದ್ದೇನೆ. ಮುತ್ತುರಾಜನ ಮುತ್ತಿಗೆ ನಾನು ರಾಜ್ಯದ ಆರೂವರೆ ಕೋಟಿ ಜನರ ಪರವಾಗಿ ಮುತ್ತು ನೀಡಿದ್ದೇನೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್‌ನ ಅಂತ್ಯಕ್ರಿಯೆಯನ್ನು ಸುಸೂತ್ರವಾಗಿ ನಡೆಸಲು ಸಹಕರಿಸಿದ ರಾಜ್‌ಕುಟುಂಬ, ಅಭಿಮಾನಿಗಳು ಹಾಗೂ ಸರ್ಕಾರದ ಇಲಾಖೆಗಳಿಗೆ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದರು.