ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ. ಸಮಗ್ರ ಕರ್ನಾಟಕ ಕಲ್ಯಾಣದ ಅತ್ಯುತ್ತಮ ಬಜೆಟ್: ಬಿ.ಸಿ. ನಾಗೇಶ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು.
ಬೆಂಗಳೂರು: ಮಾರ್ಚ್ 4,: – ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಮೂಲ ಮಂತ್ರಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಗ್ರ ಕರ್ನಾಟಕ ಕಲ್ಯಾಣದ ದೃಷ್ಟಿಕೋನವನ್ನು ಹೊಂದಿರುವ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ ನಾಗೇಶ್ ಹೇಳಿದರು.
ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ನಾಗೇಶ್ ಅವರು, ‘ಬಜೆಟ್ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನಕ್ಕೆ ಯೋಜನೆ ರೂಪಿಸಲಾಗಿದೆ. ಅಭಿವೃದ್ಧಿಯಲ್ಲಿ ಹಿಂದುಳಿದ ತಾಲೂಕುಗಳ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ. ನೀಡಲಾಗಿದೆ. ಪ್ರತಿ ಹೋಬಳಿ ಮಟ್ಟದಲ್ಲಿ ಉತ್ತಮ ಮೂಲಸೌಕರ್ಯ ಇರುವ ಶಾಲೆಗಳನ್ನು ‘ಮಾದರಿ ಶಾಲೆ’ಗಳಾಗಿ ಉನ್ನತೀಕರಿಸಲಾಗುತ್ತದೆ. ಶಾಲೆ ಮತ್ತು ಪಿಯು ಕಾಲೇಜುಗಳ ಪಿಠೋಪಕರಣಗಳಿಗೆ 100 ಕೋಟಿ ರೂ. ಅನುದಾನ ನೀಡಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಇರುವ ಪ್ರೌಢ ಶಾಲೆಗಳನ್ನು ಪದವಿಪೂರ್ವ ಕಾಲೇಜುಗಳಾಗಿ ಉನ್ನತೀಕರಿಸಲಾಗುತ್ತದೆ’ ಎಂದು ತಿಳಿಸಿದರು.
‘ನೀಟ್, ಜೆಇಇ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದತೆ ಮಾಡಿಕೊಳ್ಳಲು ‘ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ’ ಯೋಜನೆಯಡಿ ಉಚಿತ ಆನ್ಲೈನ್ ಕೋಚಿಂಗ್ ನೀಡಲಾಗುತ್ತದೆ. ಇದರಿಂದ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಮುಂತಾದ ಕೋರ್ಸ್‌ಗಳಿಗೆ ಸೇರಲು ಅನುಕೂಲವಾಗುತ್ತದೆ. ರಾಜ್ಯಮಟ್ಟದ ಆದರ್ಶ ಶಿಕ್ಷಕ/ಶಿಕ್ಷಕಿ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡುವ ಮೂಲಕ ಶಿಕ್ಷಕರಿಗೆ ಪ್ರೋತ್ಸಾಹಿಸಲಾಗುತ್ತದೆ’ ಎಂದು ಸಚಿವ ನಾಗೇಶ್ ನುಡಿದರು.
‘ಬಹುದಿನಗಳ ಬೇಡಿಕೆಯಾಗಿರುವ ಅಕ್ಷರ ದಾಸೋಹ ಯೋಜನೆಯ ಬಿಸಿಯೂಟ ಕಾರ್ಯಕರ್ತರ ಗೌರವಧನವನ್ನು 1 ಸಾವಿರ ರೂ. ಹೆಚ್ಚಿಸಲಾಗಿದೆ. ಸೃಷ್ಟಿ ಮತ್ತು ಕ್ಷೀರಭಾಗ್ಯ ಯೋಜನೆಯಡಿ ತೀವ್ರ ಅಪೌಷ್ಟಿಕ ಮಕ್ಕಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ಸಾಧಾರಣ ಅಪೌಷ್ಟಿಕ ಮಕ್ಕಳಿಗೂ ಪ್ರಸಕ್ತ ಸಾಲಿನಿಂದ ನೀಡಲು ಬಜೆಟ್ನಲ್ಲಿ ಘೋಷಿಸಲಾಗಿದೆ’ ಎಂದು ಸಚಿವ ನಾಗೇಶ್ ತಿಳಿಸಿದರು.
‘ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಸಾರ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ, ಶಿಕ್ಷಕರ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣಕ್ಕೆ ನೂತನ ಪಠ್ಯಕ್ರಮ ಅಳವಡಿಸಲು ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. 6ರಿಂದ 8ನೇ ತರಗತಿಯ 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ರಾಜ್ಯದ ಎಲ್ಲ ಕಡೆ ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆ, ವಯಸ್ಕರ ಶಿಕ್ಷಣ ಗುರಿಯಾಗಿಸಿಕೊಂಡು ಒಂದು ಸಾವಿರ ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣ ಸಾಕ್ಷರ ಗ್ರಾಮ ಪಂಚಾಯತಿಗಳಾಗಿ ಮಾಡುವ ಗುರಿ ಹೊಂದಲಾಗಿದೆ’ ಎಂದು ಸಚಿವ ನಾಗೇಶ್ ತಿಳಿಸಿದರು.
‘ಬೆಂಗಳೂರಿನಲ್ಲಿ ಆಯ್ದ 20 ಶಾಲೆಗಳನ್ನು ‘ಬೆಂಗಳೂರು ಪಬ್ಲಿಕ್ ಶಾಲೆ’ ಆಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ’ ಎಂದು ಸಚಿವ ನಾಗೇಶ್ ಹೇಳಿದರು.
ಕೋವಿಡ್-19 ಆರ್ಥಿಕ ಸಂಕಷ್ಟದ ನಡುವೆ ಆರ್ಥಿಕ ಶಿಸ್ತು ಕಾಪಾಡಿಕೊಂಡು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗಿದೆ. ಸವಾಲುಗಳನ್ನು ಎದುರಿಸುವ ಜೊತೆಗೆ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಆರೋಗ್ಯ, ಕೃಷಿ, ಕೈಗಾರಿಕೆ, ಉದ್ಯಮ, ತೋಟಗಾರಿಕೆ, ನೀರಾವರಿ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಎಲ್ಲ ವಲಯಗಳ ಅಭಿವೃದ್ಧಿ ಯೋಜನೆಗಳನ್ನು ಬಜೆಟ್ ಒಳಗೊಂಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದೆ. ಸರ್ವತೋಮುಖ ಬೆಳವಣಿಗೆಯ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತುಂಬು ಹೃದಯದಿಂದ ಅಭಿನಂದಿಸುತ್ತೇನೆ ಎಂದು ಸಚಿವ ಬಿ.ಸಿ ನಾಗೇಶ್ ಹೇಳಿದರು.