IMG 20220501 WA0000

ಪಾವಗಡ: ಅಕ್ರಮಗಳ ತಾಣವಾಗಿರುವ ಪುರಸಭೆ

DISTRICT NEWS ತುಮಕೂರು

ಪಾವಗಡ: ಅಕ್ರಮಗಳ ತಾಣವಾಗಿರುವ ಪುರಸಭೆ

ಪಾವಗಡ. .. ಪುರಸಭೆಯ ಅಧಿಕಾರಿಗಳು ಕಾಂಗ್ರೆಸ್ ಸದಸ್ಯರಿಗೆ ಏಜೆಂಟ್ ಗಳಾಗಿ ಕಾರ್ಯನಿರ್ವಹಿಸುತ್ತಿರುವುದು ತುಂಬಾ ಶೋಚನೀಯ ಸಂಗತಿಯಾಗಿದೆ ಎಂದು ಜೆಡಿ ಎಸ್ ನಾಯಕರಾದ ಮನು ಮಹೇಶ್ ಆರೋಪಿಸಿದ್ದಾರೆ. ಜೆಡಿ ಎಸ್ ಕಚೇರಿ ಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು.

ಪುರಸಭಾ ಸದಸ್ಯರು ಮತ್ತು ಅಧಿಕಾರಿಗಳು ಬಡವರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆಂದು, ಬೀದಿಬದಿ ವ್ಯಾಪಾರಿಗಳ ಮೇಲೆ ತಮ್ಮ ದರ್ಪವನ್ನು ತೋರುತ್ತಿದ್ದಾರೆ ಎಂದು, ಪುರಸಭಾ ಅಧಿಕಾರಿಗಳು ಪುರಸಭಾ ಸದಸ್ಯರೊಂದಿಗೆ ಶಾಮೀಲಾಗಿ ಅಕ್ರಮ ನೀರಿನ ಬಿಲ್ಲುಗಳನ್ನು ಹಾಕುತ್ತಿದ್ದಾರೆಂದು, 2018 ರಿಂದ ಈಚೆಗೆ ಯಾವ್ಯಾವ ಕಾಮಗಾರಿಗಳು ನಡೆದಿವೆಯೆಂದು ಮಾಹಿತಿ ಕೇಳಿದರೆ ಇದುವರೆಗೂ ಪುರಸಭೆಯ ಅಧಿಕಾರಿಗಳು ಮಾಹಿತಿ ನೀಡಿಲ್ಲವೆಂದು, ಪಟ್ಟಣದ ಬಸ್ ನಿಲ್ದಾಣದ ಬಳಿ ಕೆಎಂಎಫ್ ನಿಂದ ಅಂಗಡಿ ಮಳಿಗೆ ತೆರೆಯುವುದಕ್ಕೆ ಜಿಲ್ಲಾಧಿಕಾರಿಗಳ ಆದೇಶ ವಿದ್ದರೂ, ಒಬ್ಬ ಅಂಗವಿಕಲ ಹಾಕಿಕೊಂಡಿದ್ದ ಕೆಎಂಎಫ್ ಸಂಸ್ಥೆಯ ಅಂಗಡಿ ಮಳಿಗೆ ಯನ್ನು ಪುರಸಭಾ ಸದಸ್ಯರು ಹಾಗೂ ಪುರಸಭಾ ಅಧಿಕಾರ ವರ್ಗದವರು ತೆರವುಗೊಳಿಸಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಪುರಸಭೆಯ ಅಧಿಕಾರಿಗಳು ಪುರಸಭಾ ಸದಸ್ಯರು ಜೊತೆ ಸೇರಿ ಖಾತೆಗಳನ್ನು ಮಾಡುವ ಸಂದರ್ಭದಲ್ಲಿ ಅನೇಕ ಅಕ್ರಮಗಳನ್ನು ಎಸಗಿರುವುದು ಗಮನಕ್ಕೆ ಬಂದಿದೆ ಹಾಗೂ ಹಲವಾರು ಬಿಲ್ ಗಳಲ್ಲಿ ಅಕ್ರಮವಾಗಿ ಮಾಡಿದ್ದಾರೆ, ಗುತ್ತಿಗೆದಾರರು ಕಾಮಗಾರಿಗಳಲ್ಲಿ ಆಕ್ರಮ ನಡೆಸಿರುವ ಬಗ್ಗೆ ತಮ್ಮ ಬಳಿ ದಾಖಲೆಗಳಿವೆ ಎಂದು, ಈ ದಾಖಲೆಗಳನ್ನು ನೇರವಾಗಿ ಎಸಿಬಿಗೆ ನೀಡುವುದಾಗಿ ತಿಳಿಸಿದರು.

ಪುರಸಭೆಯ ಅಧಿಕಾರಿಗಳು ರಾಜಕೀಯ ಪಕ್ಷಗಳ ಏಜೆಂಟರಾಗಿ ಕೆಲಸ ಮಾಡದೆ . ನಿಷ್ಪಕ್ಷಪಾತವಾಗಿ ಜನರ ಸೇವೆ ಮಾಡಬೇಕೆಂದು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪುರಸಭೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ಶ್ರೀರಾಮ ಸೇನೆಯ ಅಧ್ಯಕ್ಷರಾದ ರಾಮಾಂಜಿನಪ್ಪ ನವರು ಮಾತನಾಡುತ್ತಾ, ಪಟ್ಟಣದ ಪುರಸಭೆಯ ಅಧಿಕಾರಿಗಳು, ಪಟ್ಟಣದ ರಾಮಾಂಜನೇಯ ಲೇಔಟ್ ನಲ್ಲಿ 28 ಅಡಿ ರಸ್ತೆ ಒತ್ತುವರಿ ಆಗಿರುವುದಾಗಿ ಪುರಸಭೆಗೆ ಮಾಹಿತಿ ನೀಡಿದರೂ ಸಹ , ಪ್ರಭಾವಿಗಳ ಒತ್ತಡಕ್ಕೆ ಮಣಿದು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದರು, ಪಟ್ಟಣದ ಸಾಯಿ ರಾಮ್ ಚೌಟರಿಯಲ್ಲಿ ಮದುವೆಗಳು ನಡೆಯುವಂತಹ ಸಂದರ್ಭದಲ್ಲಿ ಆ ರಸ್ತೆ ಸಂಪೂರ್ಣವಾಗಿ ಬಂದ್ ಆಗುವುದೆಂದು, ಅಲ್ಲಿ ಧ್ವನಿವರ್ಧಕ ಬಳಕೆ ಮಾಡುವುದರಿಂದ ಅಕ್ಕಪಕ್ಕದ ಮನೆಯವರಿಗೆ ಕಿರಿಕಿರಿ ಉಂಟಾಗುತ್ತದೆ ಎಂದು ಪುರಸಭೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು

ಪುರಸಭೆ ಮಾಜಿ ಸದಸ್ಯರಾದ ವೆಂಕಟೇಶ್ ಮಾತನಾಡುತ್ತಾ,
ಪುರಸಭೆಯ ಆಸ್ತಿಯನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು, ಪಟ್ಟಣದಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಹೊಸ ಬಸ್ ಸ್ಟ್ಯಾಂಡ್ ಸರ್ವೆ ಮಾಡಿಸುವಂತೆ ಅನೇಕ ಬಾರಿ ಅರ್ಜಿ ನೀಡಿದರೂ ಸಹ ಒಬ್ಬ ಪ್ರಭಾವಿ ಪುರಸಭಾ ಸದಸ್ಯರಿಗೆ ಸರ್ವೆ ಮಾಡಿಸಿದರೆ ಅವರ ಆಸ್ತಿಗೆ ತೊಂದರೆ ಆಗುತ್ತದೆ ಎಂದು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪುರಸಭೆ ಅಧಿಕಾರಿಗಳು ಬಡವರಿಗೊಂದು ನ್ಯಾಯ ಶ್ರೀಮಂತರು ನ್ಯಾಯ ಎಂಬಂತೆ ಅವರ ಕಾರ್ಯಶೈಲಿ ಇದೆ ಎಂದು ದೂರಿದರು. ಈಗಲಾದರೂ ಪುರಸಭೆ ಅಧಿಕಾರಿಗಳು ಯಾವುದೇ ರಾಜಕೀಯ ಪಕ್ಷಕ್ಕೆ ಅಂಟಿಕೊಳ್ಳದೆ ನಿಸ್ವಾರ್ಥವಾಗಿ ಕೆಲಸ ಮಾಡಬೇಕೆಂದರು. ಇಲ್ಲವಾದರೆ ಮುಂದೆ ಆಗುವ ಪರಿಣಾಮಗಳಿಗೆ ಅವರೇ ನೇರ ಹೊಣೆಗಾರರಾಗಿರುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ನ ತಾಲೂಕು ರೈತ ಸಂಘದ ಅಧ್ಯಕ್ಷ ಗಂಗಾಧರ ನಾಯ್ಡು, ತಾಲೂಕು ಜೆಡಿಎಸ್ ಅಧ್ಯಕ್ಷ ಬಲರಾಮ್ ರೆಡ್ಡಿ, ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಈರಣ್ಣ, ಗೌರವಧ್ಯಕ್ಷ ರಾಜಶೇಖರಪ್ಪ, ಮಾಜಿ ಪುರಸಭಾ ಸದಸ್ಯರಾದ ನಾಗೇಂದ್ರ. ಮುಂತಾದವರು ಭಾಗವಹಿಸಿದ್ದರು.

ವರದಿ: ಶ್ರೀನಿವಾಸುಲು ಎ