IMG 20250503 WA0047

ತುಮಕೂರು :ಶಿಥಿಲಗೊಂಡಿರುವ ಕಟ್ಟಡಗಳನ್ನು ತೆರವಿಗಾಗಿ ನಿಯಮಾನುಸಾರ ಕ್ರಮ

DISTRICT NEWS ತುಮಕೂರು

ಶಿಥಿಲಗೊಂಡಿರುವ ಕಟ್ಟಡಗಳನ್ನು ತೆರವಿಗಾಗಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದು ಸೂಚನೆ
ತುಮಕೂರು(ಕ.ವಾ.)ಮೇ.3: ಜಿಲ್ಲೆಯಲ್ಲಿರುವ ಅಂಗನವಾಡಿ, ಶಾಲಾ ಕಟ್ಟಡ, ಆವರಣ ಗೋಡೆ, ಶೌಚಾಲಯ ಸೇರಿದಂತೆ ಶಿಥಿಲಗೊಂಡಿರುವ ಹಾಗೂ ಬಳಕೆಗೆ ಯೋಗ್ಯವಲ್ಲದ ಕಟ್ಟಡಗಳನ್ನು ತೆರವುಗೊಳಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿಯಲ್ಲಿ ಶನಿವಾರ 2025-26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ತಯಾರಿಕೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿಯ ಅನಿರ್ಬಂಧಿತ ಅನುದಾನ, ಲಿಂಕ್ ಡಾಕ್ಯುಮೆಂಟ್‍ಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪಶುಪಾಲನಾ ಮತ್ತು ಪಶುವೈದ್ಯ ಸೇವೆ, ಕೃಷಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ತೋಟಗಾರಿಕೆ, ಮೀನುಗಾರಿಕೆ, ಅರಣ್ಯ ಇಲಾಖೆಗಳು ತಮ್ಮ ಇಲಾಖೆಗಳಲ್ಲಿ ಅವಶ್ಯವಿರುವ ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮೇ 9ರೊಳಗಾಗಿ ವಿವರವಾದ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಬೇಕೆಂದು ಸೂಚಿಸಿದರಲ್ಲದೆ, ವಿವರವಾದ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿ ಕಾಮಗಾರಿಯ ಅಂದಾಜು ಪಟ್ಟಿ ಹಾಗೂ ನಕ್ಷೆ ಸಿದ್ಧಪಡಿಸಿ ಮೇ 23ರೊಳಗಾಗಿ ಜಿಲ್ಲಾ ಪಂಚಾಯತಿಗೆ ಸಲ್ಲಿಸಬೇಕೆಂದು ನಿರ್ದೇಶಿಸಿದರು.
ಇಲಾಖೆಗಳು ಕೈಗೊಳ್ಳುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿಗಳಿಗೆ ಸಂಬಂಧಿಸಿದಂತೆ ಎಲ್ಲ ಇಲಾಖೆಗಳು ಏಕರೂಪದ ಅಂದಾಜು ಪಟ್ಟಿ ತಯಾರಿಸಬೇಕು. ದುರಸ್ತಿ ಅಗತ್ಯವಿರುವ ನೈಜ ಕಾಮಗಾರಿಗಳನ್ನು ಗುರುತಿಸಿ ಆದ್ಯತೆ ಮೇರೆಗೆ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಂಡು ಅನುಷ್ಟಾನಗೊಳಿಸಬೇಕು. ಸಿದ್ಧಪಡಿಸಿ ಸಲ್ಲಿಸಿದ ಕ್ರಿಯಾ ಯೋಜನೆಗಳಿಗೆ ಜೂನ್ ಮಾಹೆಯಲ್ಲಿ ಅನುಮೋದನೆ ನೀಡಲಾಗುವುದು ಎಂದರಲ್ಲದೆ, ಎಲ್ಲ ಇಲಾಖೆಗಳು ಸರ್ಕಾರದ ಆಸ್ತಿ ಸಂರಕ್ಷಣೆ ಮಾಡುವಲ್ಲಿ ಸೂಕ್ತ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
***********

 

Leave a Reply

Your email address will not be published. Required fields are marked *