IMG 20260922 WA0002

ಪಾವಗಡ : ಪೌಷ್ಟಿಕ ಆಹಾರ ಸೇವನೆ ಅಗತ್ಯ….!

DISTRICT NEWS ತುಮಕೂರು

ಪೌಷ್ಟಿಕ ಆಹಾರ ಸೇವನೆ ಅಗತ್ಯ: ನ್ಯಾಯಮೂರ್ತಿ ಮಾದೇಶ್. ವಿ.

ಪಾವಗಡ: ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವನೆ ಅತ್ಯಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಮಾದೇಶ್ ತಿಳಿದರು.

ಪಟ್ಟಣದ ಶಾಂತಿನಗರದ ಅಂಗನವಾಡಿ ಕೇಂದ್ರದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಪೌಷ್ಟಿಕ ಆಹಾರ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಜಾನುವಾರು ಸಾಕಣೆ ಕಡಿಮೆಯಾಗಿದ್ದು, ಸಾವಯವ ಗೊಬ್ಬರದ ಕೊರತೆ ಎದುರಾಗಿದೆ. ಇದರಿಂದ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗಿದ್ದು, ಇದು ಆರೋಗ್ಯಕ್ಕೆ ಮಾರಕವಾಗಿದೆ. ಪ್ರಾಚೀನ ಕಾಲದಲ್ಲಿ ನೈಸರ್ಗಿಕ ಗೊಬ್ಬರ ಬಳಸಿ ಬೆಳೆ ಬೆಳೆಯಲಾಗುತ್ತಿತ್ತು. ಕಾರ್ಯಕ್ರಮಗಳು ಪ್ರಚಾರಕ್ಕೆ ಸೀಮಿತವಾಗದೆ, ಸಾವಯವ ಕೃಷಿಗೆ ಮನ್ನಣೆ ನೀಡಬೇಕು ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶೆ ಸಿ.ಎನ್. ಮುನಿರತ್ನಮ್ಮ ಮಾತನಾಡಿ, ಆರೋಗ್ಯವೇ ಮಹಾಭಾಗ್ಯ ಎಂಬ ನಾಣ್ನುಡಿಯಂತೆ
ಉತ್ತಮ ಆಸ್ಪತ್ರೆ, ಔಷಧಗಳಿಗಿಂತ ಪೌಷ್ಟಿಕ ಆಹಾರ ಸೇವನೆ ಮುಖ್ಯ ಆಧುನಿಕ ಆಹಾರ ಪದ್ಧತಿಯಿಂದ ಪೌಷ್ಟಿಕಾಂಶದ ಕೊರತೆ ಹೆಚ್ಚಾಗಿದೆ’ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುನಿತಾ ಡಿ.ಜೆ. ಮಾತನಾಡಿ, ‘ಪ್ರಕೃತಿದತ್ತ ಆಹಾರದಲ್ಲಿ ಹೆಚ್ಚಿನ ಪೌಷ್ಟಿಕಾಂಶವಿದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಗರ್ಭಾವಸ್ಥೆಯಿಂದಲೇ ಮಕ್ಕಳಿಗೆ ಪೌಷ್ಟಿಕಾಂಶ ನೀಡಲು ಅಂಗನವಾಡಿ ಮೂಲಕ ಕ್ರಮ ವಹಿಸಲಾಗಿದೆ. ಅಪೌಷ್ಟಿಕತೆ ತಡೆಗೆ ಪೋಷಣ್ ಅಭಿಯಾನ ಮಹತ್ವದ ಪಾತ್ರ ವಹಿಸುತ್ತಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧಿಕ ಸಿವಿಲ್ ನ್ಯಾಯಾಧೀಶೆ ಪಲ್ಲವಿ, ವಕೀಲರ ಸಂಘದ ಕಾರ್ಯದರ್ಶಿ ಚಂದ್ರಪ್ಪ, ಸಹಾಯಕ ಸರ್ಕಾರಿ ಅಭಿಯೋಜಕ ರಮೇಶ್ ಬಾಬು, ತಾಲ್ಲೂಕು ಆರೋಗ್ಯಾಧಿಕಾರಿ ನಾಗೇಶ್ ನಾಯಕ್, ಮಕ್ಕಳ ತಜ್ಞ ಡಾ. ಕಿರಣ್, ವಕೀಲ ಜಯಸಿಂಹ ಕೆ.ಆರ್. ಇನ್ನು ಮುಂತಾದವರು ಉಪಸ್ಥಿತರಿದ್ದರು.