ಜನವರಿ 21 ದಾಸೋಹ ದಿನ: ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
ತುಮಕೂರು: ನಡೆದಾಡುವ ದೇವರು,ಅಭಿನವ ಬಸವಣ್ಣ,ತ್ರಿವಿಧ ದಾಸೋಹಿ ಎಂಬ ಖ್ಯಾತಿಯ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳ ಪುಣ್ಯ ಸ್ಮರಣೆಯ ದಿನವನ್ನು ದಾಸೋಹ ದಿನವೆಂದು ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಘೋಷಿಸಿದ್ದಾರೆ.
ಸಿದ್ಧಗಂಗಾ ಮಠದಲ್ಲಿ ಆಯೋಜನೆಗೊಂಡಿದ್ದ ಶಿವಕುಮಾರ ಸ್ವಾಮೀಜಿ ಅವರ ಎರಡನೇ ಪುಷ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಿ.ಎಸ್.ಯಡಿಯೂರಪ್ಪ, ಅನ್ನದಾಸೋಹದ ಜತೆಗೆ ಅಕ್ಷರ ಕಲಿಸಿದ ಸಿದ್ಧಗಂಗಾಶ್ರೀಗಳು ಪ್ರಾತಃಸ್ಮರಣೀಯರು. ನಡೆದಾಡುವ ದೇವರ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲು ಸರ್ಕಾರ ಆದೇಶ ಹೊರಡಿಸಲಿದೆ ಎಂದು ಘೋಷಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿವಕುಮಾರ ಸ್ವಾಮೀಜಿ ಅವರ ಅಂತರಂಗದ ಶಿಷ್ಯ,ಯಡಿಯೂರಪ್ಪ ಅವರ ಮುಖ ನೋಡಿದರೆ ಶ್ರೀಗಳ ಮುಖ ಅರಳುತ್ತಿತ್ತು ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಹಿರಿಯ ಶ್ರೀಗಳು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು ಅವರ ಅಶರೀರವಾಣಿ ನಮ್ಮನ್ನು ಸದಾ ಎಚ್ಚರಿಸುತ್ತಿರುತ್ತದೆ ಎಂದು ಶ್ರೀಗಳು ನುಡಿದರು.
ಶಿವಕುಮಾರ ಶ್ರೀಗಳ ಬದುಕು, ಸಾಧನೆ ಸಾರುವ ಉದ್ದೇಶದಿಂದ, ಪೂಜ್ಯರ ಹುಟ್ಟೂರಿನಲ್ಲಿ 111 ಅಡಿ ಪುತ್ಥಳಿ, ಗ್ರಾಮದ ಅಭಿವೃದ್ಧಿಗೆ 25 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ವೀರಾಪುರ ಗ್ರಾಮ ತೀರ್ಥಕ್ಷೇತ್ರ ಆಗಬೇಕು ಎಂದು ಸಿಎಂ ತಿಳಿಸಿದರು.
ಸಿದ್ಧಗಂಗಾ ಶ್ರೀಗಳ ಹುಟ್ಟೂರಾದ ರಾಮನಗರ ಜಿಲ್ಲೆ ಮಾಗಡಿ ತಾಲೂಕು ವೀರಾಪುರದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀಗಳ 111 ಅಡಿ ಪುತ್ಥಳಿ ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಯ ನೀಲನಕ್ಷೆಯ 3ಡಿ ಯನ್ನು ಸಿಎಂ ಯಡಿಯೂರಪ್ಪ ಬಿಡುಗಡೆಗೊಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಹರಿಹರ ಪಂಚಸಾಲಿ ಗುರುಪೀಠ ವಚನಾನಂದ ಶ್ರೀಗಳು, ನಾಡಿನ ಲಕ್ಷಾಂತರ ಜನರ ಆರಾಧ್ಯದೈವ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ದಿನವನ್ನು ದಾಸೋಹದಿನವನ್ನಾಗಿ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.
ಮಠಾಧ್ಯಕ್ಷರಾದ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು, ದೇಗುಲಮಠದ ಶ್ರೀಗಳು, ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ, ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್, ವೀರಶೈವ ಅಭಿವೃದ್ಧಿ ನಿಗಮದ ಬಿ.ಎಸ್.ಪರಮಶಿವಯ್ಯ, ಸಂಸದ ಜಿ.ಎಸ್.ಬಸವರಾಜು, ಶಾಸಕ ಜ್ಯೋತಿಗಣೇಶ್ ಮತ್ತಿತರರು ಉಪಸ್ಥಿತರಿದ್ದರು.