ಚಿಕ್ಕಬಳ್ಳಾಪುರ ಏ ೨೭ : ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಅವ್ಯವಹಾರ ಆಗಿದೆ. ನರೇಗಾ ಯೋಜನೆಯಲ್ಲಿ ಅಕ್ರಮ ನಡೆದಿದೆ ಅಂತ ಬಹಿರಂಗ ಸವಾಲು ಹಾಕಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ನರೇಗಾ ಕಾಮಗಾರಿಗಳನ್ನ ಪರಿಶೀಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಈ ವೇಳೆ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ ಕೆ.ಎಸ್.ಈಶ್ವರಪ್ಪ, ನಾನು ಹಾಗೂ ನಮ್ಮ ಇಲಾಖೆ ಮಲಗಿದೆ ಅಂತ ಡಿಕೆಶಿ ಹೇಳಿದ್ದಾರೆ. ಆದರೆ ಡಿಕೆಶಿ ಎಲ್ಲೆಲ್ಲೋ ಹೋಗಿ ಮಲಗಿ ಬಂದಿದ್ರು. ನಾನು ಅದರ ಸುದ್ದಿಗೆ ಹೋಗಲ್ಲ. ನಮ್ಮ ಇಲಾಖೆ ಮಲಗಿಲ್ಲ ಅನ್ನೋದಕ್ಕೆ ನಮ್ಮ ಇಲಾಖಾಧಿಕಾರಿಗಳು ಮತ್ತು ನಾನು ಓಡಾಡ್ತಿರೋದೆ ಸಾಕ್ಷಿ, ಸುಮ್ನೆ ಏನೇನೋ ಹೇಳಿಕೆ ನೀಡಿ ಉತ್ತರ ಕುಮಾರನ ಪೌರುಷ ತೋರಿಸಬೇಡಿ ಎಂದು ವ್ಯಂಗ್ಯ ಮಾಡಿದರು.
ಡಿಕೆ ಶಿವಕುಮಾರ್ ಲೂಟಿ ಮಾಡುವುದರಲ್ಲಿ ಅನುಭವಸ್ಥರು. ನಾನು ಅವರ ಜೊತೆ ಚರ್ಚೆಗೆ ಎಲ್ಲಿಗೆ ಬರಲಿ? ಎಲ್ಲೆಲ್ಲಿ ಲೂಟಿ ಮಾಡಿ ನಿಮಗೆ ಅಭ್ಯಾಸ ಇದೆಯಲ್ಲಾ ನನಗೆ ಹೇಳಿಕೊಡಿ. ನಾನು ಬಿಗಿ ಮಾಡ್ತೀನಿ. ನಾನು ಹೊಸದಾಗಿ ಈ ಇಲಾಖೆಗೆ ಬಂದಿದ್ದೀನಿ. ನನ್ನ ಇಲಾಖೆಯ ನರೇಗಾದಲ್ಲಿ ಎಲ್ಲೆಲ್ಲಿ ಲೂಟಿ ಆಗಿದೆ ಅಂತ ಹೇಳಿ, ನನ್ನ ಗಮನಕ್ಕೆ ಬಂದು ಒಂದು ಪೈಸೆ ಏನಾದ್ರೂ ದುರಪಯೋಗ ಆಗಿದ್ರೆ ನಾನು ನಿಮ್ಮ ಚಾಲೆಂಜ್ ಸ್ವೀಕರಿಸುತ್ತೇನೆ ಎಂದರು.
ಎಲ್ಲೆಲ್ಲಿ ಲೂಟಿ ಆಗಿದೆ ಅಂತ ಹೇಳಿ ಬಿಗಿ ಮಾಡ್ತೀನಿ ಅದು ಬಿಟ್ಟು ರಾಜಕಾರಣ ಮಾಡಬೇಡಿ. ಹೊಸದಾಗಿ ಕೆಪಿಸಿಸಿ ಅಧ್ಯಕ್ಷರಾಗಿದ್ದೀನಿ ಅಂತ ತೋರಿಸಿಕೊಳ್ಳೋಕೆ ನಾಟಕ ಮಾಡಬೇಡಿ. ನರೇಗಾದಲ್ಲೂ ಯಾಕೆ ರಾಜಕೀಯ ಮಾಡ್ತೀರಿ? ಜನರಿಗೆ ಕೆಲಸ ಕೊಡಬೇಕು ಅಂತ ತೀರ್ಮಾನ ಮಾಡಿದ್ದೀವಿ, ಜನ ಖುಷಿಯಿಂದ ಕೆಲಸ ಮಾಡ್ತಿದ್ದಾರೆ ಎಂದು ತಿರುಗೇಟು ನೀಡಿದರು.