ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಸರ್ಕಾರ ಬಿಬಿಎಂಪಿ ಚುನಾವಣೆ ಮಾಡಿಲ್ಲ. ಇತ್ತೀಚಿಗಷ್ಟೇ ಸುಪ್ರೀಂ ಕೋರ್ಟ್ 7 ದಿನಗಳ ಒಳಗಾಗಿ ಮೀಸಲಾತಿ ಪಟ್ಟಿ ಪ್ರಕಟಿಸಿ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು ಎಂದು ತಿಳಿಸಿದ್ದಾರೆ.
ಆ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಪ್ರತಿ ಬಾರಿ ಸರ್ಕಾರ ಚುನಾವಣೆಯನ್ನು ಮುಂದೂಡುತ್ತಲೇ ಬಂದಿದ್ದು ಇದರಿಂದ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಬಿಬಿಎಂಪಿಗೆ ಜನಪ್ರತಿನಿಧಿಗಳ ಅಗತ್ಯವಿದೆ. ಕಾಂಗ್ರೆಸ್ ನ ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ಈ ತೀರ್ಪು ಜಯ ಸಿಕ್ಕಂತಾಗಿದೆ. ಸ್ಥಳೀಯ ಸಂಸ್ಥೆಗಳನ್ನು ಉತ್ತೇಜಿಸಿ ಅವುಗಳನ್ನು ಬಲಪಡಿಸುವ ಯೋಚನೆ ಸರ್ಕಾರಕ್ಕಿಲ್ಲ.
ಇವರಿಗೆ ಸ್ಥಳೀಯ ಸಂಸ್ಥೆಗಳ ಬಲಪಡಿಸುವ ಇಚ್ಛೆ ಇದ್ದಿದ್ದರೆ ಈ ಚುನಾವಣೆ ಮಾಡಲು 2 ವರ್ಷ ಬೇಕಾಗಿರಲಿಲ್ಲ. ಜನಪ್ರತಿನಿಧಿಗಳು ಇಲ್ಲದೇ ಬಿಬಿಎಂಪಿಯಲ್ಲಿ ಅಭಿವೃದ್ಧಿ ಯೋಜನೆಗಳು ಕುಂಠಿತವಾಗಿವೆ.
ಒಂಟಿ ಮನೆ ಯೋಜನೆ ಜಾರಿ ಮಾಡಲು ಹಣ ಮೀಸಲಿಟ್ಟಿಲ್ಲ. ನಿರ್ಮಾಣವಾಗಿರುವ ಮನೆಗಳ ಬಿಲ್ ಕೂಡ ಪಾವತಿ ಆಗಿಲ್ಲ. ಮನೆ ಕಟ್ಟಿದ ಜನ ಅದನ್ನು ಮಾರಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ಗುಂಡಿ ವಿಚಾರವಾಗಿ, ತ್ಯಾಜ್ಯ ವಿಲೇವಾರಿ ವಿಚಾರ ಸಮಸ್ಯೆಯಾಗಿದೆ. ಬಿಬಿಎಂಪಿ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಚುನಾವಣೆ ಮುಂದೂಡಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.
2006-2010ರ ವರೆಗೆ ಬಿಜೆಪಿ ಆಡಳಿತದಲ್ಲಿ ಪಾಲಿಕೆ ಚುನಾವಣೆಯನ್ನು ನಡೆಸಿರಲಿಲ್ಲ. ಆಗಲೂ ಕಾಂಗ್ರೆಸ್ ನ್ಯಾಯಾಲಯದ ಮೊರೆ ಹೋಗಿತ್ತು.
ಈ ಸರ್ಕಾರ ನ್ಯಾಯಾಲಯದಲ್ಲಿ 8 ವಾರಗಳ ಕಾಲಾವಕಾಶ ಕೇಳಿತ್ತು. ಅದರಂತೆ ನ್ಯಾಯಾಲಯ ಕಾಲಾವಕಾಶ ನೀಡಿ ಚುನಾವಣೆ ನಡೆಸುವಂತೆ ತಿಳಿಸಿತ್ತು. ಆದರೆ ನ್ಯಾಯಾಲಯದ ಆದೇಶಕ್ಕೆ ಬೆಲೆ ಇಲ್ಲವೇ?
ನ್ಯಾಯಾಲಯ ಆದೇಶ ನೀಡುತ್ತಿದ್ದಂತೆ ಸರ್ಕಾರ ರಾಜಕಾಲುವೆ 1600 ಕೋಟಿ, ಬಿಜೆಪಿ ಸಚಿವರು ಶಾಸಕರ ಕ್ಷೇತ್ರಕ್ಕೆ 6.5 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಈ ಅನುದಾನದಲ್ಲಿ ತಾರತಮ್ಯ ಮಾಡಿದ್ದಾರೆ.
ಬಿಜೆಪಿ ಅನುದಾನದಲ್ಲಿ ಮುಂದೆ ಇದ್ದರೂ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಚುನಾವಣೆ ಮಾಡಲು ನಾವು ಸಿದ್ಧ ಎಂದು ಸಚಿವರು ಹೇಳಿದರು. ಆದರೆ 8 ವಾರಗಳ ಕಾಲಾವಕಾಶ ಕೋರಿ, ಚುನಾವಣೆ ನಡೆಸಲು ವಿಫಲವಾಗಿದ್ದು ಯಾರು? ವಚನಭ್ರಷ್ಟ ಸರ್ಕಾರ ಇದಾಗಿದೆ.
ಈ ಸರ್ಕಾರ ಸಂವಿಧಾನಕ್ಕೆ ಗೌರವ ನೀಡದೆ, ಅದರ ಆಶಯಕ್ಕೆ ನಡೆಯದೆ ಹೇಗೆ ಆಡಳಿತ ಮಾಡಲು ಸಾಧ್ಯ?
ಸರ್ಕಾರ ಮತ್ತೆ ಚುನಾವಣೆ ಮುಂದೂಡಲು ತೀರ್ಮಾನಿಸಿದರೆ ನ್ಯಾಯಾಲಯ ಛೀಮಾರಿ ಹಾಕಲಿದೆ. ಸರ್ಕಾರ ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಚುನಾವಣೆ ಪ್ರಕ್ರಿಯೆ ಆರಂಭಿಸಬೇಕು.
:
ಮೀಸಲಾತಿ ಪಟ್ಟಿ ಪ್ರಕಟಕ್ಕೆ ಸುಪ್ರೀಂ ಕೋರ್ಟ್ 7 ದಿನಗಳ ಕಾಲಾವಕಾಶ ನೀಡಿ 3 ದಿನ ಕಳೆದಿದೆ. ಮೀಸಲಾತಿ ಪಟ್ಟಿ ಪ್ರಕಟಿಸಿದ ಬಳಿಕ ಚುನಾವಣೆ ಪ್ರಕ್ರಿಯೆ ನಡೆಸುವಂತೆ ಆಯುಕ್ತರಿಗೆ ಸೂಚನೆ ನೀಡಿದೆ.
ಸರ್ಕಾರ ಇನ್ನೂ ಚುನಾವಣೆಯನ್ನು ಮುಂದೂಡಲು ಪ್ರಯತ್ನ ಪಡುತ್ತಿದೆ ಎಂದು ಮಾಜಿ ಬಿಬಿಎಂಪಿ ಸದಸ್ಯರಾದ ವಾಜಿದ್ ತಿಳಿಸಿದರು.
ಬೆಂಗಳೂರಿನಲ್ಲಿ 7 ಸಚಿವರಿದ್ದು, ಮನಸೋಇಚ್ಛೆ ವಾರ್ಡ್ ಮರುವಿಂಗಡಣೆ ಮಾಡಲಾಗಿದೆ. ಶಾಸಕರು ಹೇಳಿದಂತೆ ಮೀಸಲಾತಿ ಆಗಬಾರದು. ಮಾರ್ಗಸೂಚಿ ಅನುಗುಣವಾಗಿ ಮೀಸಲಾತಿ ನೀಡಬೇಕು. ಮಹಾರಾಷ್ಟ್ರ ವಿಚಾರದಲ್ಲಿ ನ್ಯಾಯಾಲಯ ಈ ಪ್ರಕ್ರಿಯೆಯಲ್ಲಿ ಶಾಮೀಲಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದು, ಇಲ್ಲಿ ಕೂಡ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿದಂತೆ ಆಗಲಿದೆ.
ನಮ್ಮ ಪಕ್ಷ 2020ರಿಂದ ಚುನಾವಣೆಗೆ ಸಿದ್ಧವಾಗಿದ್ದು, ಭ್ರಷ್ಟ ಬಿಜೆಪಿ ಸರ್ಕಾರ ಮಾತ್ರ ಸಿದ್ಧವಾಗಿಲ್ಲ. ಅವರ ಅವ್ಯವಹಾರ, ಅಕ್ರಮ ಜನರಿಗೆ ಕಾಣುತ್ತಿದೆ. ಬೆಂಗಳೂರಿನ 130 ಲಕ್ಷ ಜನರಿಗೆ ಈ ಚುನಾವಣೆ ಅಗತ್ಯವಿದ್ದು, ನೋಡಲ್ ಅಧಿಕಾರಿ ಯಾರೂ ಕೈಗೆ ಸಿಗುತ್ತಿಲ್ಲ. 7 ಸಚಿವರು ಇದ್ದರೂ ಜನರಿಗೆ ಅನ್ಯಾಯ ಆಗುತ್ತಿದೆ.
ಬೆಂಗಳೂರು ಅಭಿವೃದ್ಧಿ ಕಾಯ್ದೆ ಕೇವಲ ದಾಖಲೆಗೆ ಸೀಮಿತ. ಕಳೆದ ಬಾರಿ ಬಿಜೆಪಿ 110 ಹಳ್ಳಿ ಸೇರಿಸಿ ಬೃಹತ್ ಬೆಂಗಳೂರು ಎಂದು ಮಾಡಿದರು. ಆದರೆ ಅಲ್ಲಿ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಕುಡಿಯುವ ನೀರು, ಒಳ ಚರಂಡಿ, ಯಾವುದೇ ಸೌಕರ್ಯ ನೀಡಿಲ್ಲ. ಈಗ ಮತ್ತೊಂದು ಕಾಯ್ದೆ ತಂದಿದ್ದಾರೆ. ಇವರಿಗೆ ಬೆಂಗಳೂರು ಅಭಿವೃದ್ಧಿಗೆ ಪರಿಕಲ್ಪನೆ ಇಲ್ಲ. ಇವರ ಒಂದು ಯೋಜನೆ ತಿಳಿಸಿ.
ಬೆಂಗಳೂರು ಭ್ರಷ್ಟಾಚಾರ, ರಸ್ತೆ ಗುಂಡಿ ನಗರವಾಗಿದೆ. ಪರಿಶಿಷ್ಟ ಜನರ ಕಲ್ಯಾಣದ ಹಣ, ಅಭಿವೃದ್ಧಿ ಯೋಜನೆಗಳ ಹಣ ಎಲ್ಲಿ ಹೋಗುತ್ತಿದೆ? ಇದನ್ನು ನಾವು ಖಂಡಿಸುತ್ತೇವೆ. ಕೂಡಲೇ ಚುನಾವಣೆ ನಡೆಸಿ ಜನರಿಗೆ ನೇರವಾಗ ಬೇಕು. ಎಂದರು.