ವಿಶ್ವದ ಮೊದಲ ಮಿಲ್ಲರ್ ಮ್ಯೂಸಿಯಂ ಆಫ್ ಅನಾಮಾರ್ಫಿಕ್ ಆರ್ಟ್ ಉದ್ಘಾಟನೆ ಕಲೆ ಮತ್ತು ಪರಿಕಲ್ಪನೆಯಲ್ಲಿ ಹೊಸ ಯುಗಕ್ಕೆ ಚಾಲನೆ
ಬೆಂಗಳೂರು, ಸೆಪ್ಟೆಂಬರ್ 28, 2025: ವಿಶ್ವದ ಮೊದಲ ಅನಾಮಾರ್ಫಿಕ್ ಆರ್ಟ್ ಮ್ಯೂಸಿಯಂ – ಮಿಲ್ಲರ್ ಮ್ಯೂಸಿಯಂ ಆಫ್ ಅನಾಮಾರ್ಫಿಕ್ ಆರ್ಟ್‌ನ ಸಂಭ್ರಮದ ಉದ್ಘಾಟನೆ ಕೇವಲ ಒಂದು ಕಾರ್ಯಕ್ರಮವಾಗಿರದೆ ಒಂದು ಪ್ರಮುಖ ಸಾಂಸ್ಕೃತಿಕ ಮೈಲಿಗಲ್ಲನ್ನು ತಲುಪಿದ ಕ್ಷಣವಾಗಿತ್ತು. ಶೆರೀನ್ ಮಿಲ್ಲರ್ ಅವರ ದೂರದೃಷ್ಟಿಯ ಆಧಾರದ ಮೇಲೆ ಸ್ಥಾಪಿಸಲಾದ ಈ ಬಹುನಿರೀಕ್ಷಿತ ಸಂಸ್ಥೆಯನ್ನು ಕಲೆ, ವಾಸ್ತುಶಿಲ್ಪ ಮತ್ತು ಪ್ರಕೃತಿಯೆಲ್ಲವೂ ಒಗ್ಗೂಡಿ, ಸೌಂದರ್ಯ, ಭ್ರಮೆ ಮತ್ತು ಕಲ್ಪನೆಯಲ್ಲಿ ತಲ್ಲೀನವಾಗುವಂತೆ ಮಾಡುವ ಹೊಸ ಲೋಕವೊಂದನ್ನು ಸೃಷ್ಠಿಸುವ ಜಾಗತಿಕ ಹೆಗ್ಗುರುತಾಗಿದೆ.
ವಸ್ತುಪ್ರದರ್ಶನವನ್ನು ಸಾಂಕೇತಿಕವಾಗಿ ಭಾನುವಾರ ಸಂಜೆ 4:40 ಕ್ಕೆ ಉದ್ಘಾಟಿಸಲಾಯಿತು. ಈ ಕ್ಷಣವನ್ನು, ಕುಕ್ ಟೌನ್‌ನಲ್ಲಿರುವ ಮಿಲ್ಲರ್ ಅನಾಮಾರ್ಫಿಕ್ ಆರ್ಟ್ ಮ್ಯೂಸಿಯಂನಲ್ಲಿ ಸಮತೋಲನ, ಶಕ್ತಿ ಮತ್ತು ಅಂತ್ಯವಿಲ್ಲದ ಪ್ರೀತಿಯನ್ನು ಪ್ರತಿನಿಧಿಸುವ “Touched by the grace of eight” ಎಂದು ಬಣ್ಣಿಸಲಾಗುತ್ತದೆ. ಈ ವಸ್ತುಸಂಗ್ರಹಾಲಯ, ಗಣಿತ, ವಿಜ್ಞಾನ ಮತ್ತು ಕಲಾತ್ಮಕತೆಯ ವಿಶಿಷ್ಟ ಮಿಶ್ರಣವಾದ ಅನಾಮಾರ್ಫಿಕ್ ಕಲೆಯ ಮೂಲಕ ಸೃಜನಶೀಲತೆಯನ್ನು ಪಸರಿಸುವ ಅಸಾಧಾರಣ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ.
ಅನಾಮಾರ್ಫಿಕ್ ವರ್ಣಚಿತ್ರಗಳು, ಸರಿಯಲ್ ಶಿಲ್ಪಗಳು, ಕಲ್ಲಿದ್ದಲಿನ ಕೃತಿಗಳು ಮತ್ತು ಡಿಜಿಟಲ್ ಕಲೆಗಳನ್ನು ಪ್ರದರ್ಶಿಸಲಾಯಿತು. ಪ್ರತಿಯೊಂದೂ, ದೃಷ್ಟಿಕೋನಗಳಿಗೆ ಸವಾಲೆಸೆಯಲು, ಕುತೂಹಲವನ್ನು ಹುಟ್ಟುಹಾಕಲು ಮತ್ತು ಕಲ್ಪನೆಯನ್ನು ಪ್ರೇರೇಪಿಸಲು ವಿನ್ಯಾಸಗೊಳಿಸಲಾಗಿತ್ತು. ಪ್ರದರ್ಶನ ಸ್ಥಳಕ್ಕಿಂತ ಹೆಚ್ಚಾಗಿ, ಇದು ಸಂದರ್ಶಕರಲ್ಲಿ ಕಲೆಯ ಮೂಲಕ ಗ್ರಹಿಕೆಯನ್ನು ಹೇಗೆ ಬದಲಾಯಿಸಬಹುದು ಮತ್ತು ವಿಸ್ತರಿಸಬಹುದು ಎಂಬುದರ ಅರಿವು ಮೂಡಿಸಿತು.
ಉದ್ಘಾಟನಾ ಸಮಾರಂಭದಲ್ಲಿ ಗಣ್ಯರು ಮತ್ತು ಸಾಂಸ್ಕೃತಿಕ ನಾಯಕರು ಭಾಗವಹಿಸಿದ್ದರು, ಅವರಲ್ಲಿ ಈ ಕೆಲವರೆಂದರೆ:
● ಚಿರಂಜೀವ್ ಸಿಂಗ್, ಐಎಎಸ್ (ನಿವೃತ್ತ), ಪ್ಯಾರಿಸ್‌ನ ಯುನೆಸ್ಕೋದ ಮಾಜಿ ಭಾರತದ ರಾಯಭಾರಿ; ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕರ್ನಾಟಕ; ಮಾಜಿ ಅಭಿವೃದ್ಧಿ ಆಯುಕ್ತರು
● ದರ್ಶನ್ ಕುಮಾರ್ ವೈ.ಯು, ಉಪ ಕ್ಯುರೇಟರ್, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್
● ಪ್ರೊ. ಆರ್.ಎಚ್.ಕುಲಕರ್ಣಿ, ಖ್ಯಾತ ಕಲಾ ಇತಿಹಾಸಕಾರ, ಕರ್ನಾಟಕ ಚಿತ್ರಕಲಾ ಪರಿಷತ್
ಈ ಸಂದರ್ಭದಲ್ಲಿ ಮಾತನಾಡಿದ ಮಿಲ್ಲರ್ ಮ್ಯೂಸಿಯಂ ಆಫ್ ಅನಾಮಾರ್ಫಿಕ್ ಆರ್ಟ್‌ನ ಸಂಸ್ಥಾಪಕಿ ಮತ್ತು ನಿರ್ದೇಶಕಿ ಚೆರಿಲ್ ಅನಿತಾ ಮಿಲ್ಲರ್, ವಸ್ತುಸಂಗ್ರಹಾಲಯದ ಬಗೆಗಿನ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು:
“ಅನಾಮಾರ್ಫಿಕ್ ಕಲೆಯೆಂಬುದು ಬದಲಾಗುತ್ತಿರುವ ದೃಷ್ಟಿಕೋನಗಳಿಗೆ ಸಂಬಂಧಿಸಿದ್ದು. ಒಂದು ಕೋನದಿಂದ ವಿರೂಪಗೊಂಡಂತೆ ಕಾಣುವುದು ಸರಿಯಾದ ದೃಷ್ಟಿಕೋನದಿಂದ ನೋಡಿದಾಗ ಸೌಂದರ್ಯವಾಗಿ ಕಾಣುತ್ತದೆ. ನನ್ನ ತಾಯಿ ಶೆರೀನ್ ಮಿಲ್ಲರ್, ಈ ರೂಪವನ್ನು ತನ್ನದೇ ಆದ ಪರಿಕಲ್ಪನೆ ಮತ್ತು ಭ್ರಮೆಯ ಭಾಷೆಯೊಂದಿಗೆ ಪುನಃ ಪರಿಚಯಿಸಿದರು. ಅದನ್ನೇ ಅವರ ಜೀವನದ ಅನ್ವೇಷಣೆಯನ್ನಾಗಿ ಮಾಡಿಕೊಂಡರು.
ಈ ವಸ್ತುಸಂಗ್ರಹಾಲಯ ಅವರ ಕನಸಾಗಿತ್ತು, ಮತ್ತು ನಾನು ಇಲ್ಲಿ ಪ್ರೀತಿ ಮತ್ತು ಜವಾಬ್ದಾರಿಯೊಂದಿಗೆ ಅವರ ಘನತೆಯನ್ನು ಮುಂದಕ್ಕೆ ಸಾಗಿಸುತ್ತಿದ್ದೇನೆ. ಅನಾಮಾರ್ಫಿಕ್ ಕಲೆ, ಭಾರತದಲ್ಲಿ ಹೆಚ್ಚೇನೂ ಪ್ರಸಿದ್ಧವಲ್ಲ, ಮತ್ತು ಈ ಸ್ಥಳದ ಮೂಲಕ ಭವಿಷ್ಯದ ಕಲಾವಿದರಿಗೆ ಅದರ ಬಗ್ಗೆ ತಿಳಿದುಕೊಳ್ಳಲು, ಅದನ್ನು ಆಕರ್ಷಕವಾಗಿಸಲು ಮತ್ತು ಸ್ಪೂರ್ತಿದಾಯಕವಾಗಿಸಲು ನಾನು ಪ್ರಯತ್ನಿಸಿದ್ದೇನೆ. ನನಗೆ, ಈ ವಸ್ತುಸಂಗ್ರಹಾಲಯ ಕೇವಲ ಕಲೆಗೆ ಸಂಬಂಧಿಸಿದ್ದಷ್ಟೇ ಅಲ್ಲ; ಇದು ನನ್ನ ತಾಯಿ ಪ್ರೀತಿಸಿದ ಮತ್ತು ಹಿಂತಿರುಗಿದ ನಗರಕ್ಕೆ ಬರೆದ ಪ್ರೇಮ ಪತ್ರವಾಗಿತ್ತು,” ಎಂದರು.
ಮಿಲ್ಲರ್ ಮ್ಯೂಸಿಯಂ ಆಫ್ ಅನಾಮಾರ್ಫಿಕ್ ಆರ್ಟ್‌ನ ಉದ್ಘಾಟನೆ, ಭಾರತದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಕಲೆಯ ನಾವೀನ್ಯತೆ ಮತ್ತು ಕಲ್ಪನೆಯನ್ನು ಜಾಗತಿಕ ನಕಾಶೆಯಲ್ಲಿ ದೃಢವಾಗಿ ಸ್ಥಾಪಿಸಿದೆ. ಪ್ರಪಂಚದಾದ್ಯಂತದ ಕಲಾವಿದರು, ವಿದ್ಯಾರ್ಥಿಗಳು ಮತ್ತು ಕಲಾ ಉತ್ಸಾಹಿಗಳಿಗೆ ಇದು ತಪ್ಪಿಸಿಕೊಳ್ಳಲು ಬಯಸದ ತಾಣವಾಗಲಿದೆ, ಎಂಬ ಭರವಸೆ ಮೂಡಿಸಿದೆ.
