ಕೊಲೆಯನ್ನು ಅಪಘಾತವೆಂದು ಬಿಂಬಿಸಲಾಗಿದೆ ಎಂದು ಆರೋಪಿಸಿ ಕುಟುಂಬಸ್ಥರ ಪ್ರತಿಭಟನೆ.
ಪಾವಗಡ:: ಆಗಸ್ಟ್ 7 ರಂದು ತಾಲ್ಲೂಕಿನ ಪಳವಳ್ಳಿ ಗ್ರಾಮದ ಸಮೀಪದ ಸಪ್ಪಲಮ್ಮ ದೇವಸ್ಥಾನದ ಬಳಿ, ಪಳವಳ್ಳಿ ಗ್ರಾಮದ ಚಂದ್ರಶೇಖರ್ (28) ಅವರನ್ನು ಪೂರ್ವಯೋಜಿತವಾಗಿ ಹಲ್ಲೆ ಮಾಡಿದ್ದು, ಅದನ್ನು ಅಪಘಾತ ಎಂದು ಬಿಂಬಿಸಲಾಗಿದೆ ಎಂದು ಆರೋಪಿಸಿ, ಮೃತ ಚಂದ್ರಶೇಖರ್ ಕುಟುಂಬಸ್ಥರು ಗುರುವಾರ ಪಟ್ಟಣದ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ಪಳವಳ್ಳಿ ಗ್ರಾಮದ ಮೃತನ ಪತ್ನಿ ಶಿಲ್ಪಾ, ತಂದೆ ನಾರಾಯಣಪ್ಪ, ತಾಯಿ ಮುತ್ತ್ಯಾಲಮ್ಮ ಮತ್ತು ಕುಟುಂಬಸ್ಥರು ಚಂದ್ರಶೇಖರ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಪೊಲೀಸ್ ಠಾಣೆ ಮುಂದೆ ಒತ್ತಾಯಿಸಿದರು.
ಮೃತ ಚಂದ್ರಶೇಖರ್ ಪತ್ನಿ ಶಿಲ್ಪಾ ಮಾತನಾಡಿ, ತಮ್ಮ ಪತಿ ಪ್ಯಾಸೆಂಜರ್ ಆಟೋ ಚಲಾಯಿಸಿಕೊಂಡು ಜೀವನ ನಡೆಸುತ್ತಿದ್ದರು. ಆಗಸ್ಟ್ 7 ರಂದು ಸಂಜೆ ಪಳವಳ್ಳಿ ಗ್ರಾಮದ ಮೂರ್ತಿ, ಮಧು, ಹರಿ ಎಂಬುವವರು ತಮ್ಮ ಪತಿಯನ್ನು ಮನೆಯಿಂದ ಕರೆದುಕೊಂಡು ಹೋಗಿ ಹೊಡೆದು, ಹಣ ಮತ್ತು ಮೊಬೈಲ್ ಕಸಿದುಕೊಂಡು ಅದನ್ನು ಅಪಘಾತ ಎಂದು ಬಿಂಬಿಸಿದ್ದಾರೆ ಎಂದು ಆರೋಪಿಸಿದರು.
ತೀವ್ರವಾಗಿ ಗಾಯಗೊಂಡಿದ್ದ ಚಂದ್ರಶೇಖರ್ ಅವರಿಗೆ 20 ದಿನಗಳ ಕಾಲ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ, ಆಗಸ್ಟ್ 25 ರ ಮಂಗಳವಾರ ರಾತ್ರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಂದೆ ನಾರಾಯಣಪ್ಪ ಮತ್ತು ತಾಯಿ ಮುತ್ತ್ಯಾಲಮ್ಮ ಕಣ್ಣೀರಿಡುತ್ತಾ ತಮ್ಮ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.
ಇರುವ ಒಬ್ಬನೇ ಮಗ ಹತ್ಯೆಗೀಡಾಗಿದ್ದರಿಂದ ಕುಟುಂಬಕ್ಕೆ ಆಧಾರವೇ ಇಲ್ಲದಂತಾಗಿದೆ. ಎರಡು ವರ್ಷದ ಒಂದು ಮಗು ಮತ್ತು ಎರಡು ತಿಂಗಳ ಹಸುಗೂಸಿಗೆ ತಂದೆ ಇಲ್ಲದಂತೆ ಮಾಡಿದ ಹೀನ ಕೃತ್ಯ ಎಸಗಿದ ಆರೋಪಿಗಳನ್ನು ಕಾನೂನಿನ ಪ್ರಕಾರ ಕಠಿಣವಾಗಿ ಶಿಕ್ಷಿಸಬೇಕು ಎಂದು ಪೊಲೀಸರಿಗೆ ವಿನಂತಿಸಿದರು.
ಪಿಎಂ ರಿಪೋರ್ಟ್ ನಂತರ ಪರಿಶೀಲಿಸುತ್ತೇವೆ ಸಿಐ ಸುರೇಶ್*
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಮೃತಪಟ್ಟ ಚಂದ್ರಶೇಖರ್ ಅವರ ಪತ್ನಿ ಶಿಲ್ಪಾ ನೀಡಿದ ದೂರಿನ ಮೇರೆಗೆ, ಪಿಎಂ ರಿಪೋರ್ಟ್ ಬಂದ ನಂತರ ಪರಿಶೀಲಿಸಿ, ಅದು ಹತ್ಯೆ ಎಂದು ದೃಢಪಟ್ಟರೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಸಿಐ ಸುರೇಶ್ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.
ವರದಿ : ಶ್ರೀನಿವಾಸಲು ಎ
