ಬೆಂಗಳೂರು ಮೇ ೬ :- ಕೋವಿಡ್ – 19 ಲಾಕ್ಡೌನ್ ಅವಧಿಯಲ್ಲಿ ಎಂಎಸ್ಎಂಇ ವಲಯಕ್ಕೆ ಪರಿಹಾರ ನೀಡಲು, ಎಫ್.ಕೆ.ಸಿ.ಸಿ.ಐ. ಸಂಸ್ಥೆಯು ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತ್ತು. ಸರ್ಕಾರವು ನಮ್ಮ ಮನವಿ ಸ್ವೀಕರಿಸಿ, ವಿದ್ಯುತ್ ಬಿಲ್ ಗಳ ನಿಗದಿತ ಶುಲ್ಕದ ಮನ್ನಾ, ಸಮಯೋಚಿತ ಪಾವತಿಗೆ ಶೇಕಡ ಒಂದರಷ್ಟು ರಿಯಾಯಿತಿ, ಪಾವತಿಗೆ ಕಂತಿನ ಸೌಲಭ್ಯಗಳು, ೨೦೨೦ರ ಜೂನ್ ೩೦ರವರೆಗೆ ವಿದ್ಯುತ್ ಸಂಪರ್ಕ ಕಡಿತದಿಂದ ವಿನಾಯಿತಿ ಮತ್ತು ವಿಳಂಬದ ಪಾವತಿಗೆ ಶೇಕಡ ೫೦ ರಿಂದ ೭೦ರ ವರೆಗೆ ದಂಡದ ಬಡ್ಡಿ ಇಂದ ರಿಯಾಯಿತಿ ಘೋಷಿಸಿರುತ್ತದೆ.
ಇಂತಹ ಕಷ್ಟ ಪರಿಸ್ಥಿತಿಯಲ್ಲಿ ಎಂಎಸ್ಎಂಇ ಸಂಸ್ಥೆಗಳಿಗೆ ಸ್ಪಂದಿಸಿ ಸರ್ಕಾರ ಕೈಗೊಂಡ ಕ್ರಮಗಳನ್ನು ಎಫ್.ಕೆ.ಸಿ.ಸಿ.ಐ. ಸಂಸ್ಥೆಯು ಸ್ವಾಗತಿಸಿ, ರಾಜ್ಯದ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ರವರನ್ನು ಅಭಿನಂದಿಸುತ್ತದೆ. ರಾಜ್ಯದಲ್ಲಿನ ಸ್ವಯಂ ಉದ್ಯೋಗಗಳು, ನೌಕರರು, ಹೂ ಬೆಳೆಗಾರರು, ರೈತರಿಗೆ ಪರಿಹಾರಗಳನ್ನು ದೇಶದಲ್ಲಿಯೇ ಪ್ರಪ್ರಥಮವಾಗಿ ಘೋಷಿಸಿದ ರಾಜ್ಯವಾಗಿದ್ದು, ಸರ್ಕಾರವು ಇನ್ನೂ ಕೆಲವು ರಿಯಾಯಿತಿಗಳನ್ನು ಭವಿಷ್ಯದಲ್ಲಿ ಘೋಷಿಸುತ್ತದೆ ಎಂದು ನಾವು ಭಾವಿಸುತ್ತೇವೆ.